ದೇವನೂರು
ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಕಡೂರಿನ ಆಗ್ನೇಯಕ್ಕೆ 18 ಕಿ.ಮೀ. ಮತ್ತು ಹಾಸನ ಜಿಲ್ಲೆಯ ಬಾಣಾವರದ ಪಶ್ಚಿಮಕ್ಕೆ 8 ಕಿ.ಮೀ. ದೂರದಲ್ಲಿದೆ. ಅರಸೀಕೆರೆ ಇಲ್ಲಿಂದ 22 ಕಿಮೀ ದೂರದಲ್ಲಿರುವ ಈ ಗ್ರಾಮದ ವಿಸ್ತೀರ್ಣ 1685. ಎಕರೆ ದೇವನೂರು ಪುರಾಣ ಪ್ರಸಿದ್ಧ ಸ್ಥಳ. ಇಲ್ಲಿ ನವ ಸಿದ್ಧರು ನಿಂತು ತಪಸ್ಸು ಮಾಡಿದರೆಂದು ಐತಿಹ್ಯವಿದೆ. ಇದಕ್ಕೆ ದೇವಪುರ, ಅಮರಪುರ, ಸುರಪುರ, ಗಿರ್ವಾಣಪುರ ಎಂಬ ಹೆಸರಗಳಿದ್ದುವೆಂದು ತಿಳಿದು ಬರುತ್ತದೆ. ಈ ಊರಿಗೆ ಲಕ್ಷ್ಮೀನಾರಾಯಣಪುರವೆಂಬ ಪ್ರತಿನಾಮವಿತ್ತೆಂದು 1234ರ ಶಾಸನವೊಂದರಲ್ಲಿ ಹೇಳಲಾಗಿದೆ. ಇಲ್ಲಿಯ ಕೆರೆಯ ಬಳಿಯಲ್ಲಿ ಹೊಯ್ಸಳ ಕೃತಿಗಳ ಹಲವು ಅವಶೇಷಗಳು ಸಿಕ್ಕಿವೆ. ಇಲ್ಲೊಂದು ರಾಮೇಶ್ವರ ದೇವಾಲಯವಿತ್ತೆಂದು ಹೇಳಲಾಗಿದೆ. ಅಲ್ಲದೆ ಒಂದು ಜೈನ ಬಸದಿಯೂ ಇತ್ತು. ಇಲ್ಲಿ ಅನೇಕ ಪಾಳು ನಿವೇಶನಗಳಿವೆ.

ಇಲ್ಲಿಯ ಲಕ್ಷ್ಮಿಕಾಂತ ಅಥವಾ ಲಕ್ಷ್ಮಿನಾರಾಯಣ ದೇವಾಲಯ ಸು. 17ನೆಯ ಶತಮಾನದ್ದು. ಇದು ಕಣಿವೆಯಲ್ಲಿ ಕಟ್ಟಿದ ಸಾಮಾನ್ಯ ಕಟ್ಟಡ. ಒಳಗಿನ ವಿಗ್ರಹ ಹೊಯ್ಸಳ ಶೈಲಿಯದು. ಈ ದೇವಾಲಯ ಪೂರ್ವಾಭಿಮುಖವಾಗಿದೆ. ಇದರಲ್ಲಿ ಗರ್ಭಗೃಹ, ಅಂತರಾಳ, ಒಳ ನವರಂಗ ಮತ್ತು ಹೊರನವರಂಗ ಇವೆ. ಒಳನವರಂಗದಲ್ಲಿ ಆಳ್ವಾರುಗಳೇ ಮೊದಲಾದವರ ವಿಗ್ರಹಗಳಿವೆ. ಜೈಮಿನಿ ಭಾರತವನ್ನು ಬರೆದ ಲಕ್ಷ್ಮೀಶನ ವಿಗ್ರಹವೂ ಇದೆ. ಇವನ ಸ್ಥಳೀಯ ಹೆಸರು ಲಕ್ಷ್ಮಿಕಾಂತ್ ಹೆಬ್ಬಾರ್. ಹೊರ ನವರಂಗದಲ್ಲಿ ವಿಷ್ವಕ್ಸೇನ, ಭೂದೇವಿ ಮುಂತಾದವರ ವಿಗ್ರಹಗಳಿವೆ. ಇದರ ಮೂಲ ವಿಗ್ರಹದ ಎತ್ತರ, ಪೀಠ ಮತ್ತು ಪ್ರಭಾವಳಿಗೂ ಸೇರಿದಂತೆ 5 ಅಡಿಗಳು. ಈ ವಿಗ್ರಹದ ಚತುರ್ಭುಜಗಳಿಂದ ಕೂಡಿದೆ. ದೇವಾಲಯದ ಪ್ರಾಕಾರದ ಹಿಂಗೋಡೆಯ ಬಳಿಯ ಮಂಟಪವೊಂದನ್ನು ಲಕ್ಷ್ಮೀಶನ ಜನ್ಮಸ್ಥಳವೆಂದು ಹೇಳುತ್ತಾರೆ. ಲಕ್ಷ್ಮೀಶ ಇದೇ ಊರಿನವನೆಂದು ಹೇಳಲಾಗಿದೆ. ಅವನು ತನ್ನ ಜೈಮಿನಿ ಭಾರತವನ್ನು ಇಲ್ಲಿಯ ಲಕ್ಷ್ಮಿಕಾಂತಸ್ವಾಮಿ ದೇವಾಲಯದಲ್ಲಿ ಕುಳಿತು ರಚಿಸಿದನೆಂದು ಜನರ ನಂಬಿಕೆ. ಲಕ್ಷ್ಮೀಶನ ಮನೆಯದೆನ್ನಲಾದ ನಿವೇಶನದ ಬಳಿ ಇರುವ ಮಂಟಪವೊಂದನ್ನು ಲಕ್ಷ್ಮೀಶ ಕಟ್ಟಿಸಿದನೆಂದು ನಂಬಿಕೆ.

ಈ ಊರಿನ ಉತ್ತರ ಭಾಗದಲ್ಲಿ ಸಿದ್ಧೇಶ್ವರ ದೇವಾಲಯವಿದೆ. ಇದು ಹೊಯ್ಸಳ ಕಾಲದ ಶೈಲಿಯ ಕಟ್ಟಡ. ಇದರಲ್ಲಿ ಗರ್ಭಗೃಹ, ಸುಕನಾಸಿ ನವರಂಗ ಮತ್ತು ಮುಖಮಂಟಪಗಳಿವೆ. ಇದರ ಕಂಬಗಳಲ್ಲಿ ಚಿತ್ರಗಳನ್ನು ಚೆನ್ನಾಗಿ ಕೆತ್ತಲಾಗಿದೆ. ಇಲ್ಲಿರುವ ಒಂದು ಕಂಬ, ಆಕೃತಿಯಲ್ಲೂ ಕಲಾರಚನೆಯಲ್ಲೂ ಬೇಲೂರಿನ ದೇವಾಲಯದಲ್ಲಿರುವ ನವರಂಗದ ಕಂಬವನ್ನು ಹೋಲುತ್ತದೆ. ದೇವಾಲಯ ಬಳಿ ಸೂರ್ಯ, ಸಪ್ತಮಾತೃಕೆಯರು, ಗಣೇಶ, ಮುಂತಾದ ಮೂರ್ತಿಗಳಿವೆ. ಈ ದೇವಾಲಯದ ಲಿಂಗವನ್ನು ಜಗನ್ನಾಥ ವಿಜಯದ ಕರ್ತೃ ರುದ್ರ ಬಟ್ಟ ನರ್ಮದೆಯಿಂದ ತಂದು ಸ್ಥಾಪಿಸಿದನೆಂದು ಹೇಳುತ್ತಾರೆ. ಈ ದೇವಾಲಯಗಳಲ್ಲದೆ ಈ ಊರಿನಲ್ಲಿ ಬನಶಂಕರಮ್ಮ ಅಂತರಘಟ್ಟಮ್ಮ, ವೀರಭದ್ರ ಸ್ವಾಮಿ, ಚಂದ್ರಮೌಳೇಶ್ವರೀ ಚೌಡೇಶ್ವರಿ, ಮೊದಲಾದ ಸಣ್ಣಪುಟ್ಟ ದೇಗುಲಗಳಿವೆ. 

ಸಕ್ಕರೆಪಟ್ಟಣ, ಆಸಂದಿ, ಬೇಲೂರು, ಬಾಣಾವರ ಪಾಳೆಯಪಟ್ಟುಗಳಿಂದಲೂ ಹೊಯ್ಸಳ ರಾಜ್ಯದಿಂದಲೂ ಇಲ್ಲಿಯ ಸಾಂಸ್ಕøತಿಕ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಆಗ್ಗಿಂದಾಗ್ಗೆ ಪ್ರೋತ್ಸಾಹ ದೊರಕುತ್ತಿದ್ದರಬೇಕು.

ಅರಸೀಕೆರೆ-ಬಿರೂರು ರೈಲುಮಾರ್ಗ ಈ ಊರಿನ ಮೂಲಕ ಹಾದು ಹೋಗುತ್ತದೆ. ಪ್ರತಿ ಗುರುವಾರ ಇಲ್ಲಿ ಸಂತೆ ನಡೆಯುತ್ತದೆ.                                      						 (ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ